ಪ್ರಾಟಿಸ್ಟಂಟ್ ಮತ

 	ರೋಮನ್ ಕ್ಯಾತೊಲಿಕ್ ಹಾಗೂ ಪೌರಸ್ತ್ಯ ಆರ್ತಡಾರ್ಕ್ ಧರ್ಮಸಭೆಗಳಿಂದ ಉದ್ದೇಶಪೂರ್ವಕವಾಗಿ ಬೇರ್ಪಟ್ಟು ನಿಲ್ಲುವ ಎಲ್ಲ ಕ್ರೈಸ್ತ ಧರ್ಮಸಭೆಗಳು ಅನುಸರಿಸುವ ಸುಧಾರಿತ ಮತ. ಸ್ಟೆಯರ್‍ನ ಮಹಾಸಭೆಯಲ್ಲಿ (ಡಿಯೆಟ್) ಕ್ರೈಸ್ತ ನಂಬಿಕೆ ಹಾಗೂ ಜೀವನಕ್ರಮದ ಬಗ್ಗೆ ಬಹುಮತದಿಂದ ಅಂಗೀಕೃತವಾದ ಒಂದು ನಿರ್ಣಯವನ್ನು (1528) ಪ್ರತಿಭಟಿಸಿ, ಪ್ರತಿಯೊಬ್ಬ ವ್ಯಕ್ತಿಯೂ ದೇವರ ಸಮಕ್ಷಮದಲ್ಲಿ ತನ್ನ ವರ್ತನೆಗೆ ತಾನೇ ನೇರವಾಗಿ ಜವಾಬ್ದಾರನಾಗುತ್ತಾನೆ ಎಂಬುದನ್ನು ಪ್ರಧಾನವಾಗಿ ಎತ್ತಿ ಹಿಡಿದ ಕೆಲವು ಕ್ಯಾತೊಲಿಕ್ ಕ್ರೈಸ್ತರಿಗೆ ಈ ಹೆಸರನ್ನು ಮೊತ್ತಮೊದಲು ಅನ್ವಯಿಸಲಾಗಿತ್ತು. ಹೀಗೆ ವಾದಿಸುವವರು ಅಂದಿನ ಕ್ಯಾತೋಲಿಕ್ ಧರ್ಮಸಭೆಯದಕ್ಕಿಂತ ಭಿನ್ನವಾದ ನಿಲವನ್ನು ತಾಳಿದುದರಿಂದ ಅವರು ಬೇರೆಯೇ ಒಂದು ಧರ್ಮಸಭೆಯನ್ನು ಏರ್ಪಡಿಸುವುದು ಅನಿವಾರ್ಯವಾಯಿತು. ಕ್ಯಾತೊಲಿಕ್ ಮತ್ತು ಪಾಟಿಸ್ಟಂಟ್ ಎಂಬ ಭಿನ್ನ ಧರ್ಮಸಭೆಗಳು ಹೀಗೆ ಏರ್ಪಟ್ಟವು.

	ಪ್ರಾಟಸ್ಟಂಟ್ ಪಂಥ ಹುಟ್ಟುವುದಕ್ಕೆ ಹಿನ್ನೆಲೆಯಾದ ಕಾರಣಗಳನ್ನು ಮಧ್ಯಯುಗದ ಅಖಂಡ ಕ್ಯಾತೊಲಿಕ್ ಧರ್ಮಸಭೆಯಲ್ಲಿ ಕಾಣಬಹುದು; ಈಚಿನ ಸ್ಕಾಟ್ ಪಂಥ, ನಾಮಿನಲಿಸ್ಟ್ ಪಂಥಗಳ ಬೆಳವಣಿಗೆ ಆಚಾರ ಸಂಹಿತೆಯಲ್ಲಿ ಬಲಿಪೂಜೆಗಳ ಸಂಖ್ಯೆಯನ್ನು ಹೆಚ್ಚಿಸಿದುದು. ಪರಮ ಪ್ರಸಾದದ ಸ್ವೀಕಾರವನ್ನು ಮಿತಗೊಳಿಸಿದುದು, ಧರ್ಮಗುರುಗಳಲ್ಲಿ ಅಜ್ಞಾನ ನೈತಿಕ ಅಧಃಪತನ ಧರ್ಮಕ್ಷೇತ್ರಗಳಲ್ಲಿ ಧರ್ಮಾಧ್ಯಕ್ಷರ ಗೈರುಹಾಜರಿ, ರೋಮನ್ ಧಾರ್ಮಿಕ ಅಧಿಕಾರಿಗಳಲ್ಲಿ ಸ್ವಜನಪಕ್ಷಪಾತ ಮತ್ತು ಒಟ್ಟು ಆಡಳಿತ ವ್ಯವಸ್ಥೆಯಲ್ಲಿ ಮೇಲ್ಮಟ್ಟದ ಗುರುಗಳ ಮೇಲೆ ಶ್ರೀಮಂತರು ಪ್ರಭಾವ ಬೀರಿದ್ದು, ಪುಣ್ಯವನ್ನು (ಇಂಡಲ್ಜೆನ್ಸ್) ವಿಕ್ರಯಿಸುವುದು ಇತ್ಯಾದಿ ಮಾರ್ಪಾಟುಗಳು. ಇದರ ಜೊತೆಯಲ್ಲಿ ಪುನರುಜ್ಜೀವನ ಕಾಲದ ಬುದ್ಧಿ ಪ್ರಧಾನ ವಾತಾವರಣ ಪ್ರಬಲವಾದ್ದು, ಸಮಾಜದಲ್ಲಿ ಆದ ಬದಲಾವಣೆಗಳು, ಮಧ್ಯಮವರ್ಗ ಸುಸ್ಥಿರವಾಗಿ ಬೆಳೆದದ್ದು, ರಾಜರ ಅಧಿಕಾರದ ವೃದ್ಧಿ, ರಾಷ್ಟ್ರೀಯ ಭಾವನೆಗಳ ಅಭಿವೃದ್ಧಿ-ಇವನ್ನೂ ಸೇರಿಸಬಹುದು.

	ವಿಟನ್‍ಬರ್ಗ್ ದೇವಾಲಯದ ಮಹಾದ್ವಾರಕ್ಕೆ 1517ರಲ್ಲಿ ಮಾರ್ಟಿನ್ ಲೂತರ್ ಅಂಟಿಸಿದ 97 ಪ್ರಮೇಯಗಳು ಪ್ರಾಟೆಸ್ಟಂಟ್ ಪಂಥ ಹುಟ್ಟುವುದಕ್ಕೆ ಸದ್ಯದ ನಿಮಿತ್ತವಾದುವು. ಈ ಪ್ರಮೇಯಗಳು ಇಂಡಲ್ಜೆನ್ಸನ್ನು ವಿರೋಧಿಸಿದುವು. ಈ ಸಂದರ್ಭದಲ್ಲಿ ಲೂತರ್ ಒಂದು ಧಾರ್ಮಿಕ ಸಾಮಾಜಿಕ ಕ್ರಾಂತಿಯ ಕೇಂದ್ರವಾದ ಧರ್ಮ ದರ್ಶನದಲ್ಲಿ ಸುಧಾರಣೆಯನ್ನು ಅಪೇಕ್ಷಿಸುವವರು, ಧರ್ಮಸಭೆಯನ್ನು ತಿದ್ದಬೇಕೆನ್ನುವವರು. ಪೋಪನ ಅಧಿಕಾರವ್ಯಾಪ್ತಿಯನ್ನು ಕುಂಠಿತಗೊಳಿಸಬೇಕೆಂದಿದ್ದವರು ಇಂಥ ಹಲವರು ಲೂತರನೇ ತಮ್ಮ ನಾಯಕನೆಂದು ಭಾವಿಸಿದರು. ಧರ್ಮಸಭೆಯನ್ನು ತಿದ್ದಿ ಸುಧಾರಿಸುವ ಕೆಲಸವನ್ನು ವಿಟನ್‍ಬರ್ಗ್‍ನಲ್ಲಿ ಲೂತರನು ಜೂರಿಕ್‍ನಲ್ಲಿ ಉಲ್‍ರಿಖ್ ಜ್ವಿಂಗ್ಲಿಯೂ ಮಾಡಿದರು. ಇದಕ್ಕೋಸ್ಕರ ನಗರಗಳನ್ನೂ ಧರ್ಮಾಧ್ಯಕ್ಷರನ್ನೂ ತಮ್ಮ ಪರವಾಗಿ ಒಲಿಸುವ ಪ್ರಯತ್ನಗಳನ್ನು ಇವರು ಮಾಡುತ್ತಿದ್ದರು. ಇದೇ ಹೊತ್ತಿನಲ್ಲಿ ಯಾವುದೇ ಬಗೆಯ ಅತಿರೇಕದ ವ್ಯಾಖ್ಯಾನಗಳಿಗೆ ನಿಗದಿಪಡಿಸುವುದು ಅವಶ್ಯವೆಂದು ತೋರಿದುದರಿಂದ 1530ರಲ್ಲಿ ಔಗ್ಸ್‍ಬರ್ಗ್ ಧರ್ಮಪ್ರಕಟಣೆ ಸಿದ್ಧವಾಯಿತು. ಆದರೆ ಇದು ಎಲ್ಲ ಸುಧಾರಕರ ಒಪ್ಪಿಗೆಯನ್ನು ಪಡೆಯಲಿಲ್ಲ ಮಾತ್ರವಲ್ಲದೆ ಕ್ಯಾತೊಲಿಕರೊಡನೆ ಸಂಧಾನ ಮಾಡಬೇಕೆಂಬ ಉದ್ದೇಶವನ್ನೂ ಸಾಧಿಸಲಿಲ್ಲ. ಇದರಲ್ಲಿರುವ ಸಂಪ್ರದಾಯವಾದಿ ಒಲವುಗಳುಳ್ಳ ತತ್ತ್ವಗಳನ್ನು ತೀವ್ರಗಾಮಿ ತತ್ತ್ವಗಳನ್ನು ಪ್ರತಿಪಾದಿಸುತ್ತಿರುವ ಜ್ವಿಂಗ್ಲಿ ಮತ್ತು ಅವನ ಅನುಯಾಯಿಗಳು ವಿರೋಧಿಸಿದರು. ಹೀಗೆ ಪ್ರಾಟಸ್ಟಂಟರಲ್ಲಿ ಒಡಕು ಹುಟ್ಟಿತು. ಈ ಒಡಕನ್ನು ಸ್ವಲ್ಪಮಟ್ಟಿಗೆ ತುಂಬಿದವ ಜಾನ್ ಕ್ಯಾಲ್ವಿನ್. ಜಿನೀವ ನಗರದಲ್ಲಿ ತನ್ನದೇ ಧರ್ಮತತ್ತ್ವಗಳನ್ನು ಈತ ಪ್ರತಿಪಾದಿಸಿದ. ಆಗಲೇ ಜ್ವಿಂಗ್ಲಿ ಮತ್ತು ಕ್ಯಾಲ್ವಿನರ ನಡುವೆ ಹೊಂದಾಣಿಕೆ ತರಲು ಪ್ರಯತ್ನಿಸಿದ ಬ್ಯೂಕರನ ತೆಟ್ರಪಾಲಿಟನ್ ಪ್ರಕಟಣೆಯ ಹಲವು ಅಂಶಗಳನ್ನು ಕ್ಯಾಲ್ವಿನ್ ಪುರಸ್ಕರಿಸಿದ. 1550ರ ಹೊತ್ತಿಗೆ ಪ್ರಾಟಸ್ಟಂಟ್ ಕ್ಯಾಲ್ವಿನಿಸಂ ಅತ್ಯಂತ ಬಲಿಷ್ಠವಾಗಿ, ಫ್ರಾನ್ಸ್ ಸ್ವಿಟ್ಜರ್‍ಲೆಂಡ್ ನೆದರ್‍ಲ್ಯಾಂಡ್ಸ್ ಸ್ಕಾಟ್‍ಲೆಂಡ್ ಮತ್ತು ಜರ್ಮನಿಗಳಿಗೆ ಹರಡಿತು. ಲೂತರನ ಸಂಪ್ರದಾಯ ಪ್ರಷ್ಯ ಹಾಗೂ ಸ್ವೀಡನ್ನುಗಳಿಗೆ ಹರಡಿತು.

	16ನೆಯ ಶತಮಾನದ ಕೊನೆಯಲ್ಲಿ ಮತ್ತು 17ನೆಯ ಶತಮಾನದ ಆದಿಯಲ್ಲಿ ಪ್ರಾಟಸ್ಟಂಟ್ ಧರ್ಮತತ್ತ್ವಗಳೂ ಒಟ್ಟು ಶಿಸ್ತಿನ ಕ್ರಮಗಳೂ ಆಯಾ ಪಂಥಗಳಿಗೆ ಅನುಸಾರವಾಗಿ ಖಚಿತಗೊಂಡುವು. ಎಂದರೆ ಹೀಗೆ ಸುಧಾರಿತ ಧರ್ಮಸಭೆಗಳಲ್ಲಿ ಆಂತರಿಕ ಒಗ್ಗಟ್ಟು ಉಳಿಯಲಿಲ್ಲ. ಕ್ಯಾತೊಲಿಕ್ ಧರ್ಮಸಭೆಯನ್ನು ತಿದ್ದುವ ಮಾತಂತೂ ದೂರವೇ ಉಳಿಯಿತು. ಲೂತರನ ಪಂಥದವರು ಮುಖ್ಯವಾಗಿ ಔಗ್ಸಬರ್ಗ್ ಪ್ರಕಟಣೆಯನ್ನೂ ಕ್ಯಾಲ್ವಿನಿಸ್ಟರು ಕ್ಯಾಲ್ವಿನನ ಬರಹಗಳನ್ನೂ ಪ್ರಮಾಣವೆಂದು ಅಂಗೀಕರಿಸಿದರು. ಕ್ಯಾಲ್ವಿನಿಸ್ಟರ ನಂಬಿಕೆಗಳ ಪ್ರಮಾಣವಾಗಿ ಇತರ ಕೆಲವು ಪ್ರಕಟಣೆಗಳೂ ಅಂಗೀಕೃತವಾದುವು (ಗ್ಯಾಲಿಕನ್ ಪ್ರಕಟಣೆ 1559; ಸ್ಕಾಟಿಷ್ ಪ್ರಕಟಣೆ 1560, ಇತ್ಯಾದಿ)

	ಇಂಗ್ಲೆಂಡಿನಲ್ಲಿ ಎಂಟನೆಯ ಹೆನ್ರಿಯ ಆಡಳಿತಾವಧಿಯಲ್ಲಿ ಆರಂಭವಾದ ಸುಧಾರಣಾ ಕಾರ್ಯ ಕ್ರಮೇಣ 1566ರಲ್ಲಿ ಮೂವತ್ತೊಂಬತ್ತು ಪ್ರಮೇಯಗಳ ಅಂಗೀಕಾರದಲ್ಲಿ ಸ್ಪಷ್ಟ ಸ್ವರೂಪವನ್ನು ಪಡೆಯಿತು. ಚರ್ಚ್ ಆಫ್ ಇಂಗ್ಲೆಂಡಿನ ಸಂಪ್ರದಾಯವಾದಿ ಆಚರಣಾವಿಧಿಗಳು ಕಟ್ಟಾ ಕ್ಯಾಲ್ವಿನಿಸ್ಟ್ ಒಲವುಗಳುಳ್ಳ ಪ್ಯೂರಿಟನ್ ಪಂಥದವರಿಗೆ ಒಪ್ಪಿಗೆಯಾಗದೆ, ಕ್ರಮೇಣ ಅವರು ಬೇರ್ಪಟ್ಟು ಪ್ರೆಸ್ಬಿಟೇರಿಯನ್ ಹಾಗೂ ಕಾಂಗ್ರೆಗೇಷನಲಿಸ್ಟ್ ಸಭೆಗಳನ್ನು ಸ್ಥಾಪಿಸಿದರು. ಅಮೆರಿಕದಲ್ಲಿ ತಲೆಯೆತ್ತಿದ ಹಲವು ಉಪಪಂಥಗಳ ಹುಟ್ಟನ್ನು ಇಲ್ಲಿ ಗಮನಿಸಬೇಕು. ಜೊತೆಗೆ ಅಮೆರಿಕದಲ್ಲಿರುವ ಪ್ರಾಟಸ್ಟಂಟರಲ್ಲಿ ಬ್ಯಾಪ್ಟಿಸ್ಟ್ ಪಂಥ, ಕ್ವೇಕರ್ಸ್, ಮೆನನೈಟ್ ಪಂಥಗಳನ್ನೂ ಸೇರಿಸಬೇಕು. ಇದಲ್ಲದೆ ಪೆಂಟೆಕಾಸ್ಟರ್ ಆಂದೋಲನ, ಮಾರ್ಮನ್ಸ್, ಜೆಹೋವನ ಸಾಕ್ಷಿಗಳೂ ಪ್ರಾಟಸ್ಟಂಟ್ ಎಂಬ ಹೆಸರನ್ನು ಪಡೆಯುತ್ತವೆ.

	ಜಾನ್ ವೆಸ್ಲಿ (18ನೆಯ ಶತಮಾನದ ಉತ್ತರಾರ್ಧ) ಎಂಬ ಪ್ರಾಟಸ್ಟಂಟ್ ಧಾರ್ಮಿಕ ನಾಯಕ ಇಂಗ್ಲೆಂಡಿನಲ್ಲಿ ಪ್ರಾಟಸ್ಟಂಟ್ ಧಾರ್ಮಿಕ ನಾಯಕ ಇಂಗ್ಲೆಂಡಿನಲ್ಲಿ ಪ್ರಾಟಸ್ಟಂಟರನ್ನು ಹೆಚ್ಚಿನ ಧಾರ್ಮಿಕ ಪರಿಶುದ್ಧತೆಯತ್ತ ಪರಿವರ್ತಿಸುವ ಕೆಲಸವನ್ನು ವಹಿಸಿಕೊಂಡನಲ್ಲದೆ ಬೇರೆ ದೇಶಗಳಲ್ಲೂ ತನ್ನ ಮೆತಾಡಿಸ್ಟ್ ಧರ್ಮಸಭೆಗಳನ್ನು ಸ್ಥಾಪಿಸಿದ. ಇವರು ಮೊದಲು ಆ್ಯಂಗ್ಲಿಕನ್ ಧರ್ಮಸಭೆಗೆ ಸೇರಿದವರಾದರೂ ಕ್ರಮೇಣ ಸ್ವತಂತ್ರ ಧರ್ಮಸಭೆಗಳನ್ನು ಸಂಘಟಿಸಿದರು. ಹೀಗೆಯೇ ಬ್ಯಾಪ್ಟಿಸ್ಟ್ ಮಿಷನರಿ ಸೊಸೈಟಿ (1792), ಲಂಡನ್ ಮಿಷನರಿ ಸೊಸೈಟಿ (1799), ಬ್ರಿಟಿಷ್ ಅಂಡ್ ಫಾರಿನ್ ಬೈಬಲ್ ಸೊಸೈಟಿ (1804) ಮತ್ತು ಮೆತಾಡಿಸ್ಟ್ ಮಿಷನರಿ ಸೊಸೈಟಿ (1813)-ಇವು ಸ್ಥಾಪಿತವಾಗಿ ಮಾತೃ ಸಭೆಗಳಿಂದ ಬೇರ್ಪಟ್ಟು ಸ್ವತಂತ್ರ ಉಪಪಂಥಗಳಾದುವು. ಇವರ ಪ್ರಯತ್ನಗಳಿಂದ ಪ್ರಾಟಸ್ಟಂಟ್ ಪಂಥದ ಕ್ರೈಸ್ತಧರ್ಮ ಎಲ್ಲಾ ಭೂಖಂಡವನ್ನು ಪ್ರವೇಶಿಸಿತು. ಈ ಎಲ್ಲ ಪ್ರಚಾರಕ ಸಂಸ್ಥೆಗಳು 1921ರಲ್ಲಿ ಇಂಟರ್‍ನ್ಯಾಷನಲ್ ಮಿಷನರಿ ಕೌನ್ಸಿಲ್ ಎಂಬ ಹೆಸರಿನಲ್ಲಿ ಒಗ್ಗೂಡಿ ವಿವಿಧ ಕ್ರೈಸ್ತ ಧರ್ಮಸಭೆಗಳ ಏಕೀಕರಣದ (ಎಕ್ಯುಮೆನಿಸಂ) ಆಂದೋಲನಕ್ಕೆ ದಾರಿ ಮಾಡಿಕೊಟ್ಟುವು.

	ಸಾಮಾಜಿಕ ನೈತಿಕ ವಿಷಯಗಳಲ್ಲಿ ವಿವಿಧ ಪ್ರಾಟಸ್ಟಂಟ್ ಪಂಥಗಳ ಐಕ್ಯ ಸಾಧಿಸಲು ಫೇಯ್ತ್ ಅಂಡ್ ಆರ್ಡರ್ ಮೂವ್‍ಮೆಂಟ್ (1927) ಮತ್ತು ಧರ್ಮಸಿದ್ಧಾಂತಗಳಲ್ಲಿ ಐಕ್ಯವನ್ನು ಸಾಧಿಸಲು ಲೈಫ್ ಅಂಡ್ ವರ್ಕ್ ಮೂವ್‍ಮೆಂಟ್‍ಗಳು (1925) ಅಸ್ತಿತ್ವಕ್ಕೆ ಬಂದುವು. ತರುವಾಯ ವಲ್ರ್ಡ್ ಕೌನ್ಸಿಲ್ ಆಫ್ ಚರ್ಚಸ್ (1948) ಎಂದು ಇವು ಪುನರ್ಘಟಿತವಾದುವು. ಧರ್ಮಪ್ರಚಾರ ಕಾರ್ಯದಲ್ಲಿ ವಿವಿಧ ಪಂಥಗಳ ಏಕೀಕರಣ ಅಪೇಕ್ಷಣೀಯವಾದುದರಿಂದ ಇಂಟರ್‍ನ್ಯಾಷನಲ್ ಮಿಷನರಿ ಕೌನ್ಸಿಲ್ ಸಹ ವಲ್ರ್ಡ್ ಕೌನ್ಸಿಲ್ ಆಫ್ ಚರ್ಚಸ್ ಅನ್ನು ಸೇರಿತು. ವಿವಿಧ ಪ್ರಾಟಸ್ಟಂಟ್ ಪಂಥಗಳನ್ನು ಏಕೀಕರಿಸುವ ದಿಸೆಯಲ್ಲಿ ಚರ್ಚ್ ಆಫ್ ಸೌತ್ ಇಂಡಿಯ (1948) ಒಂದು ಗಮನಾರ್ಹ ಒಕ್ಕೂಟವಾಯಿತು. ಆ್ಯಂಗ್ಲಿಕನರೂ ಸೇರಿದಂತೆ ಇದುವರೆಗೆ ವಿಭಿನ್ನವಾದ ಪಂಥಗಳು ಈ ಒಕ್ಕೂಟದಲ್ಲಿ ಒಂದಾದುವು.

	ಪ್ರಾಟಸ್ಟಂಟ್ ಪಂಥದ ನಂಬಿಕೆಗಳ ಸ್ಥೂಲ ಸ್ವರೂಪ ಹೀಗಿದೆ: ನಂಬಿಕೆಯಿಂದ ಮಾತ್ರ ರಕ್ಷಣೆ. ಮುಕ್ತಿಯನ್ನು ಪಡೆಯುವುದು ದೇವರ ಕೃಪೆಯಿಂದ ಮಾತ್ರ ಸಾಧ್ಯ, ಮನುಷ್ಯ ಆಚರಿಸುವ ಯಾವುದೇ ಪುಣ್ಯಕಾರ್ಯದಿಂದಲ್ಲ. ನಿಜವಾದ ನಂಬಿಕೆಯ ಸ್ವರೂಪವನ್ನೂ ದೇವರ ಚಿತ್ತವನ್ನೂ ಕಂಡುಹಿಡಿಯಬೇಕಾದರೆ ಬೈಬಲ್ ಒಂದೇ ಪರಮ ಪ್ರಮಾಣ. ಇನ್ನು ಸಂಪ್ರದಾಯದ ಸಾಕ್ಷ್ಯದ ವಿಚಾರ. ಕ್ರೈಸ್ತ ಸಂಪ್ರದಾಯವನ್ನು ಅದರಲ್ಲೂ ಕ್ರಿಸ್ತಶಕದ ಮೊದಲ ಐದು ಶತಮಾನಗಳ ಸಂಪ್ರದಾಯವನ್ನು ದೇವರ ವಾಕ್ಯಕ್ಕೆ ಅದು ನಿಷ್ಠೆಯನ್ನು ತೋರ್ಪಡಿಸುವ ಪ್ರಮಾಣದಲ್ಲಿ ಅಂಗೀಕರಿಸಬಹುದು. ಧರ್ಮಸಭೆಯ ಮುಖ್ಯ ಕಾರ್ಯ ದೇವರ ವಾಕ್ಯವನ್ನು ಬೋಧಿಸುವುದು; ಸಂಸ್ಕಾರಗಳಲ್ಲಿ ಜ್ಞಾನಸ್ನಾನ ಮತ್ತು ಪರಮಪ್ರಸಾದ ಇವೆರಡೇ ಬೈಬಲಿನ ಆಧಾರವನ್ನು ಪಡೆದಿವೆ, ಪೂಜಾವಿಧಿ ಆಚಾರಗಳಲ್ಲಿ ದೇವರ ವಾಕ್ಯಕ್ಕೆ ಪ್ರಾಧಾನ್ಯ. ಇಲ್ಲೆಲ್ಲ ಲೂತರನ್, ಕ್ಯಾಲ್ವಿನಿಸ್ಟ್, ಜ್ವಿಂಗ್ಲಿಯನ್ ಇಂಥ ಉಪಪಂಥಗಳಲ್ಲಿ ವೈವಿಧ್ಯಗಳು, ಭಿನ್ನಾಭಿಪ್ರಾಯಗಳು ಉಂಟು. ಸಾಮಾನ್ಯವಾಗಿ ಲೂತರನ್ ಪಂಥ ಹೆಚ್ಚು ಸಂಪ್ರದಾಯವಾದಿಯಾಗಿದ್ದರೆ ಜ್ವಿಂಗ್ಲಿಯನ್ ಪಂಥ ತೀವ್ರಗಾಮಿಯಾಗಿದೆ.

	ಹೀಗಿದ್ದರೂ ಪ್ರಾಟಸ್ಟಂಟ್ ಪಂಥಗಳು ಕೇವಲ ನೇತ್ಯಾತ್ಮಕ ಸಂಸ್ಥೆಗಳಲ್ಲ, ಧರ್ಮಸಭೆ, ಧರ್ಮಸಭೆಗೂ ಪ್ರಪಂಚಕ್ಕೂ ಇರುವ ಸಂಬಂಧಗಳು, ಧರ್ಮಸಭೆಯ ಬೋಧನೆ ದೇವರ ವಾಕ್ಯದ ಪ್ರಾಮಾಣ್ಯಕ್ಕೂ ಇರುವ ಸಂಬಂಧಗಳು-ಇವೇ ಮೊದಲಾದವುಗಳ ಬಗೆಗೆ ಸ್ಟಷ್ಟ ಹಾಗೂ ತಮ್ಮವೇ ಆದ ನಿಲವುಗಳನ್ನು ಪ್ರಾಟಸ್ಟಂಟ್ ಪಂಥ ತಳೆದಿದೆ. ಯಾವುದೇ ಒಂದು ವ್ಯವಸ್ಥೆಯಲ್ಲಿ ಧರ್ಮಸಭೆಯನ್ನು ಕಟ್ಟುಗೊಳಿಸುವುದನ್ನು ಅದು ವಿರೋಧಿಸುತ್ತದೆ. ಆಧ್ಯಾತ್ಮಿಕ ವಾಸ್ತವತೆಯೂ ಅನುಭವರೂಪದ ವಾಸ್ತವತೆಯೂ ಆಗಿರುವ ಧರ್ಮಸಭೆಯ ನಿಜಸ್ವರೂಪದಲ್ಲಿರುವ ಆಂತರಿಕ ಕಕ್ರ್ಷಣವನ್ನು ಅದು ತನ್ನದೇ ರೀತಿಯಲ್ಲಿ ಬಗೆಹರಿಸಲು ಪ್ರಯತ್ನಿಸುತ್ತದೆ. ಈ ಪ್ರಯತ್ನದಲ್ಲಿ ಧರ್ಮಸಭೆ ನಿಜವಾದ ಗುಣಗಳಲ್ಲಿ ಒಂದೊಂದನ್ನು ಒಂದೊಂದು ಸಂದರ್ಭದಲ್ಲಿ ಒತ್ತಿಹೇಳಿ ಹಲವು ಭಿನ್ನ ಘಟಕಗಳಿಗೆ ಎಡೆಮಾಡಿಕೊಡುತ್ತದೆ. ಒಟ್ಟಿನಲ್ಲಿ ಪ್ರಾಟಸ್ಟಂಟ್ ಪಂಥ ಒಂದು ನಕಾರಾತ್ಮಕ ಧರ್ಮಸಭೆ ಎನ್ನುವುದಕ್ಕಿಂತಲೂ ಧನಾತ್ಮಕವಾಗಿ ಧರ್ಮಸಭೆಯ ನಿಜಸ್ವರೂಪವನ್ನು ಶೋಧಿಸುವ ಪ್ರಯತ್ನಗಳ ಹಲವು ರೂಪಗಳ ಸಮುದಾಯವಾಗಿದೆ ಎನ್ನುವುದೇ ಸರಿಯಾಗುತ್ತದೆ.
(ಇ.ಎನ್.ಎಸ್.ಜೆ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ